ಮಹಿಷಾಸುರ
ಒಬ್ಬ ರಾಕ್ಷಸ, ದಿತಿಯ ಮಕ್ಕಳನ್ನೆಲ್ಲ ಇಂದ್ರ ಕೊಂದಾಗ ಆಕೆ ಸುಪಾಶ್ರ್ವ ಎಂಬ ಮುನಿಯ ಆಶ್ರಮದ ಸಮೀಪದಲ್ಲಿ ಎಮ್ಮೆಯಂತೆ ನಿಂತು ಪುತ್ರಕಾಮಿಯಾಗಿ ತಪಸ್ಸು ಮಾಡಿದಳು. ಇದರಿಂದ ಸುಪ್ರೀತನಾದ ಬ್ರಹ್ಮಪ್ರತ್ಯಕ್ಷನಾಗಿ ಆಕೆಯಲ್ಲಿ ಬಲಿಷ್ಠನಾದ ಪುತ್ರ ಹುಟ್ಟುವನೆಂದು ಹೇಳಿ ಹೋದ. ಸಮೀಪದ ಆಶ್ರಮದಲ್ಲಿದ್ದ ಸುಪಾಶ್ರ್ವಮುನಿಗೆ ತಿಳಿಸಿದಾಗ ಎಮ್ಮೆಯಂತೆ ನಿಂತು ತಪಸ್ಸು ಮಾಡಿದ್ದರಿಂದ ಕೋಣದಂತಿರುವ (ಮಹಿಷದಂತೆ) ಮಗ ಹುಟ್ಟುತ್ತಾನೆಂದು ವಿವರಣೆ ಕೊಟ್ಟ. ಗಾಬರಿಗೊಂಡ ದಿತಿ ಮರಳಿ ಬ್ರಹ್ಮನನ್ನು ಪ್ರಾರ್ಥಿಸಿದಾಗ ಮುಖಮಾತ್ರ ಕೋಣದಂತಿರುವುದು. ಉಳಿದ ಆಕಾರವೆಲ್ಲ ಮನುಷ್ಯನಂತಿರುವುದು ಅನುಗ್ರಹಿಸಿದ. ಹೀಗೆ ದಿತಿಯ ಗರ್ಭದಲ್ಲಿ ಮಹಿಷ ಹುಟ್ಟಿದ. ಮಹಿಷಾಸುರ ತನಗೆ ಮರಣವೇ ಬಾರದಂತೆ ಶಿವವನ್ನು ಕುರಿತು ತಪಸ್ಸು ಮಾಡಿದ. ಶಿವ ಪ್ರತ್ಯಕ್ಷವಾಗಿ ಮರಣವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯವಾದದ್ದೆಂದು ಹೇಳಿದಾಗ ಮಹಿಷ ತನಗೆ ಹೆಂಗಸಿನಿಂದ ಮಾತ್ರ ಮರಣವಾಗಲೆಂದು ಬೇಡಿ ಶಿವನಿಂದ ತಥಾಸ್ತು ಎನಿಸಿಕೊಂಡ. ಮುಂದೆ ಮಹಿಷಾಸುರ ಕೊಬ್ಬಿ ದೇವತೆಗಳಿಗೆ ಕಿರುಕುಳ ಕೊಡಲು ಪ್ರಾರಂಭಿಸಿದ. ಆತನ ದುಷ್ಕøತ್ಯ ತಡೆಯಲು ಸಾಧ್ಯವಾಗದೇ ಹೋದಾಗ ದೇವತೆಗಳೆಲ್ಲ ಸೇರಿ ತಮ್ಮ ತೇಜಸ್ಸಿನಿಂದ ಒಂದೊಂದು ಭಾಗವನ್ನು ಕೂಡಿಸಿ ಸ್ತುತಿಸಿದರು. ಆಗ ದಿವ್ಯಸುಂದರಿಯೋರ್ವಳು ಅವಿರ್ಭವಿಸಿದಳು. ಅವಳಿಗೆ ದೇವತೆಗಳೆಲ್ಲ ತಮ್ಮ ಶ್ರೇಷ್ಠವಾದ ಒಂದೊಂದು ಆಯುಧವನ್ನು ಕೊಟ್ಟು ತಮ್ಮ ಕಷ್ಟಪರಿಹಾರಕ್ಕಾಗಿ ಆಕೆಯಲ್ಲಿ ಮೊರೆಯಿಟ್ಟರು.

	ಆಕೆ ತ್ರಿಪುರಸುಂದರಿ ಎಂಬ ಹೆಸರಿನಿಂದ ಹಿಮವತ್‍ಪ್ರಾಂತ್ಯದಲ್ಲಿ ಕ್ರೀಡಿಸುತ್ತಿದ್ದಾಗ ನಾರದ ಮಹಿಷನಲ್ಲಿಗೆ ಬಂದು ಆಕೆಯ ರೂಪವನ್ನು ಬಣ್ಣಿಸಿದ. ಅವಳ ರೂಪದಿಂದ ಪುಳಕಿತನಾದ ಮಹಿಷ ಆಕೆಯನ್ನು ಒಲಿಸಿಕೊಳ್ಳಲು ಹವಣಿಸಿದ. ತನ್ನನ್ನು ಯುದ್ಧದಲ್ಲಿ ಸೋಲಿಸಿದರೆ ಮುದುವೆಯಾಗುವುದಾಗಿ ತ್ರಿಪುರಸುಂದರಿ ಹೇಳಿದಳು. ಅದಕ್ಕೆ ಒಪ್ಪಿದ ಮಹಿಷಾಸುರ ಅವಳೊಂದಿಗೆ ಘೋರವಾದ ಕದನಕ್ಕಿಳಿದು ಅದರಲ್ಲಿ ಮಡಿದ. ಈ ವೃತ್ತಾಂತ ದೇವೀಭಾಗವತ, ಮಾರ್ಕಂಡೇಯ ಪುರಾಣ. ಮತ್ಸ್ಯ ಪುರಾಣಗಳಲ್ಲಿ ಬಂದಿದೆ.

	ರಂಭ ಎಂಬ ರಾಕ್ಷಸ ಪುತ್ರಾರ್ಥಿಯಾಗಿ ಅಗ್ನಿಯನ್ನು ಕುರಿತು ತಪಸ್ಸುಮಾಡಿದ. ಆಗ ಅಗ್ನಿ ಪ್ರತ್ಯಕ್ಷನಾಗಿ ನಿನಗೆ ದೇವತೆಗಳನ್ನು ಸದೆಬಡಿಯುವ ಮಗ ಹುಟ್ಟುವ ಆದರೆ ನೀನು ಮೊದಲು ಯಾವ ಪ್ರಾಣಿಯೊಂದಿಗೆ ಕ್ರೀಡಿಸುವೆಯೋ ಅಂಥ ಮಗಹುಟ್ಟುವ ಎಂದ. ರಂಭ ಒಂದು ಮಹಿಷಿಯನ್ನು ಕ್ರೀಡಿಸಲಾಗಿ ಮಹಿಷಾಕೃತಿಯ ರಾಕ್ಷಸ ಹುಟ್ಟಿದ. ಈ ವೃತ್ತಾಂತವೂ ದೇವೀಭಾಗವತದಲ್ಲಿದೆ.
 (ಬಿ.ಎನ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ